ನಾಯಕರು, ಜಿಂಜಿಯ

ವಿಜಯನಗರದ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಪ್ರಾಂತ್ಯಗಳಲ್ಲೊಂದಾಗಿದ್ದ ಜಿಂಜಿಯಲ್ಲಿ ಅಧಿಕಾರಿಗಳಾಗಿದ್ದು, ಅನಂತರ ಆಶ್ರಿತರಾಗಿ, ಕ್ರಮೇಣ ಸ್ವತಂತ್ರವಾಗಿ ಆಳುತ್ತಿದ್ದವರು. ಸುಮಾರು 1464ರಲ್ಲಿ ವಿಜಯನಗರದ ಪ್ರಾಂತ್ಯಾಧಿಕಾರಿಗಳನ್ನು ಜಿಂಜೀ ಪ್ರಾಂತ್ಯಕ್ಕೆ ಕ್ರಮವಾಗಿ ನಿಯಮಿಸಲಾರಂಭವಾಯಿತು. ಅನಂತರ ಜಿಂಜೀಯ ನಾಯಕ ಮನೆತನ ಪ್ರಾರಂಭವಾಯಿತು. ಜಿಂಜೀ ನಾಯಕರ ಕಾಲ ಮತ್ತು ವಂಶಾವಳಿಗಳನ್ನು ಉಪಲಬ್ಧ ಆಧಾರಗಳಿಂದ ನಿರ್ದಿಷ್ಟವಾಗಿ ತಿಳಿಯುವುದು ಸಾದ್ಯವಿಲ್ಲವಾಗಿದೆ. ಸುಮಾರು 1490ರ ವರೆಗೂ ಪ್ರಾಂತ್ಯಾಧಿಕಾರಿಯಾಗಿದ್ದ ವೀರಪ್ಪನಾಯಕನ ತರುವಾಯ ಅಧಿಕಾರಕ್ಕೆ ಬಂದ ತುಬಾಕಿ ಕೃಷ್ಣಪ್ಪ ನಾಯಕ (1490-1520) ಇಂದಿನ ದಕ್ಷಿಣ ಆರ್ಕಾಟ್ ಜಿಲ್ಲೆಯಲ್ಲಿರುವ ಶ್ರೀ ಮೂಷಣಂ ಮತ್ತು ತಿರುಕೋಯಿಲೂರು ಪಟ್ಟಣ ದೇವಾಲಯಗಳನ್ನು ನಿರ್ಮಿಸಿದ. ಜಿಂಜೀ ಪಟ್ಟಣದ ಅವಶೇಷಗಳಲ್ಲಿ ಕಾಣುವ ದೊಡ್ಡ ಕಣಜಗಳು, ಕಲ್ಯಾಣ ಮಹಲ್, ಬೆಟ್ಟದ ಸುತ್ತು ನಿರ್ಮಿಸಿರುವ ಅಭೇದ್ಯವಾದ ಗೋಡೆಗಳು ಇವು ಕೃಷ್ಣಪ್ಪನ ಕಾಲದಲ್ಲಿ ನಿರ್ಮಾಣವಾಗಿರಬೇಕೆಂದು ತೋರುತ್ತದೆ. ತುಬಾಕಿ ಕೃಷ್ಣಪ್ಪನ ಅನಂತರ ಅಚ್ಯುತ ವಿಜಯ ರಾಮಚಂದ್ರ ನಾಯಕ ಅಧಿಕಾರಕ್ಕೆ ಬಂದನೆಂದು ಹೇಳಲಾಗಿದೆ. ಸುಮಾರು 1540-41 ಕ್ಕೆ ಸಂಬಧಿಸಿದ ಶಾಸನದಿಂದ ತಿಳಿಯುವಂತೆ ವಿಜಯ ರಾಮಚಂದ್ರ ನಾಯಕ ವಿಜಯನಗರದ ಆಡಳಿತಕ್ಕೆ ಒಳಪಟ್ಟು ಜಿಂಜೀಯ ಪ್ರಾಂತ್ಯಾಧಿಕಾರಿಯಾಗಿದ್ದ. ಅವನ ಅನಂತರ ಆಡಳಿತಕ್ಕೆ ಬಂದ ಮುತ್ಯಾಲ ನಾಯಕ ರಾಜಗಿರಿಯ ಬಳಿ ವೆಂಕಟರಮಣಸ್ವಾಮಿ ದೇವಾಲಯವನ್ನು ಕಟ್ಟಿಸಿದ. ಇವನ ಅನಂತರ ವೆಂಕಟಪ್ಪ ನಾಯಕ ಅಧಿಕಾರಕ್ಕೆ ಬಂದ. ಅನಂತರ ಜಿಂಜೀಯ ನಾಯಕನಾದವನು ಕೃಷ್ಣಪ್ಪ.

ಜಿಂಜೀಯ ಕೃಷ್ಣಪ್ಪ ನಾಯಕ ವಿಜಯನಗರದ ವೆಂಕಟಪತಿ ರಾಯನ ಸಮಕಾಲೀನನಾಗಿದ್ದನೆಂದು ತಿಳಿಯುತ್ತದೆ. ಕೃಷ್ಣಪ್ಪ ನಾಯಕ ತನ್ನ ತಂದೆಯ ಮರಣಾನಂತರ ಪಟ್ಟಕ್ಕೆ ಬರುವುದು ತಡವಾಯಿತು. ಏಕೆಂದರೆ 1586ರಲ್ಲಿ ಕೃಷ್ಣಪ್ಪ ತನ್ನ ಒಡೆಯನಾದ ವೆಂಕಟಪತಿರಾಯನ ವಿರುದ್ದ ದಂಗೆ ಎದ್ದಿದ್ದ. ಕುಪಿತನಾದ ವೆಂಕಟಪತಿರಾಯ ಕೃಷ್ಣಪ್ಪನನ್ನು ಸೋಲಿಸಿ ಬಂಧನದಲ್ಲಿಟ್ಟ. ಆದರೆ ತಂಜಾವೂರಿನ ರಘುನಾಥ ನಾಯಕ ವೆಂಕಟಪತಿರಾಯನ ಮನವೊಲಿಸಿ ಕೃಷ್ಣಪ್ಪನಾಯಕನನ್ನು ಬಂಧವಿಮುಕ್ತನನ್ನಾಗಿ ಮಾಡಿದ. ಈ ಉಪಕಾರಕ್ಕಾಗಿ ಕೃಷ್ಣಪ್ಪ ನಾಯಕ ರಘುನಾಥ ನಾಯಕನಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡಿದ.

ಕೃಷ್ಣಪ್ಪನಾಯಕ ವೆಂಕಟಪತಿರಾಯನ ಪ್ರೀತಿವಿಶ್ವಾಸಗಳಿಗೆ ಪಾತ್ರನಾಗಿರಲಿಲ್ಲ. ಅವನು ಕ್ರಮವಾಗಿ ಕಪ್ಪಕಾಣಿಕೆಗಳನ್ನು ಸಲ್ಲಿಸುತ್ತಿರಲಿಲ್ಲ. ತನ್ನ ಪ್ರಥಮ ದಂಗೆಯ ಪರಾಭವದ ಅನಂತರ ವರ್ಷಗಳಲ್ಲಿ ಸ್ವಾಮಿನಿಷ್ಠೆಯನ್ನು ಕಳೆದುಕೊಂಡ. ವೆಂಕಟಪತಿರಾಯನ ಸೈನ್ಯ 1607ರಲ್ಲಿ ಕೃಷ್ಣಪ್ಪನಾಯಕನನ್ನು ಸೋಲಿಸಿತು. ಕೃಷ್ಣಪ್ಪ ಶರಣಾಗತನಾದ. ಆದರೆ ಮಧುರೈ ಮತ್ತು ತಂಜಾವೂರು ನಾಯಕರ ಪ್ರಾರ್ಥನೆಯಿಂದಾಗಿ ಕೃಷ್ಣಪ್ಪ ಮತ್ತೆ ಜಿಂಜೀೀ ಪ್ರಾಂತ್ಯವನ್ನು ಪಡೆದ. ಕೃಷ್ಣಪ್ಪ ನಾಯಕ ಪೋರ್ಚುಗೀಸ್ ಮತ್ತು ಡಚ್ಚರೊಡನೆ ಸಂಬಂಧ ಇಟ್ಟುಕೊಂಡಿದ್ದ. ಅವನು ಡಚ್ ವ್ಯಾಪಾರಿಗಳಿಗೆ ಕೋಠಿಯನ್ನು ಕಟ್ಟಿಕೊಳ್ಳಲು ಅನುಮತಿನೀಡಿದ. ಕೃಷ್ಣಪ್ಪ ನಾಯಕನ ಆಡಳಿತದಲ್ಲಿ ಸಮರ್ಥ ಅಧಿಕಾರಿಯಾಗಿದ್ದ ಅಯ್ಯ ಎಂಬ ಬ್ರಾಹ್ಮಣ ಡಚ್ಚರಿಗೆ ನೆರವು ನೀಡಿದ. ಇದರಿಂದ ಕೃಷ್ಣಪ್ಪ ನಾಯಕನಿಗೆ ವಿಶೇಷ ಧನಲಾಭ ಉಂಟಾಯಿತು. ಜಿಂಜೀಯ ನಾಯಕರಲ್ಲಿ ಪ್ರಮುಖನಾಗಿದ್ದ ಕೃಷ್ಣಪ್ಪ ನಾಯಕ ವಿಷ್ಣು ಭಕ್ತನಾಗಿದ್ದ. 

ಕೃಷ್ಣಪ್ಪ ನಾಯಕನ ಅನಂತರ ಅಧಿಕಾರಕ್ಕೆ ಬಂದ ಅವನ ಉತ್ತರಾಧಿಕಾರಿಗಳು ಸಮರ್ಥರಾಗಿರಲಿಲ್ಲ. ವರದಪ್ಪ ನಾಯಕರು ಮತ್ತು ಅಪ್ಪ ನಾಯಕರು ದುರ್ಬಲರಾಗಿದ್ದರು. ಜೊತೆಗೆ ಈ ಕಾಲದಲ್ಲಿ ಅನೇಕ ರಾಜಕೀಯ ಪರಿವರ್ತನೆಗಳುಂಟಾದವು. ವಿಜಯನಗರದ ಶ್ರೀ ರಂಗರಾಯನ ಸಾಮಂತನಾಗಿದ್ದ ಮದುರೆಯ ತಿರುಮಲ ನಾಯಕ ದುರಾಶೆಯಿಂದ ಕೂಡಿದ್ದು ಸ್ವತಂತ್ರ ರಾಜನಾಗಲು ಪ್ರಯತ್ನಿಸುತ್ತಿದ್ದ. ತಿರುಮಲ ನಾಯಕ ಕುತಂತ್ರ ಮತ್ತು ಕುಟಿಲೋಪಾಯಗಳಿಂದ ದಕ್ಷಿಣ ಭಾರತದ ರಾಜಕೀಯವನ್ನು ಅಸ್ತವ್ಯಸ್ತ ಮಾಡಿದ. ಸುಮಾರು 1648ರಲ್ಲಿ ಬಿಜಾಪುರದ ಸುಲ್ತಾನ ಜಿಂಜೀಯನ್ನು ಆಕ್ರಮಿಸಿದ. ಸುಲ್ತಾನರ ಸೈನ್ಯದಲ್ಲಿ ಪ್ರಭಾವಶಾಲಿಗಳಾಗಿದ್ದಮರಾಠರ ಪ್ರಭಾವಕ್ಕೆ ಜಿಂಜೀ ಪ್ರಾಂತ್ಯ ಒಳಪಟ್ಟಿತು.

ಜಿಂಜೀ ನಾಯಕರು ಅನೇಕ ಕೋಟೆಕೊತ್ತಲಗಳನ್ನೂ ದೇವಾಲಯ ಮತ್ತು ಮಂಟಪಗಳನ್ನೂ ನಿರ್ಮಿಸಿದರು. ಅವುಗಳ ಅವಶೇಷಗಳನ್ನು ಇಂದಿಗೂ ಕಾಣಬಹುದಾಗಿದೆ. ಎರಡನೆಯ ಕೃಷ್ಣಪ್ಪ ನಾಯಕ ಕೃಷ್ಣಾ ಪಟ್ಟಣವನ್ನು ಕಟ್ಟಿಸಿದ. ಅವನು ಈ ಪಟ್ಟಣದಲ್ಲಿ ಕ್ರೈಸ್ತ ದೇವಾಲಯವನ್ನು ಕಟ್ಟಿಕೊಳ್ಳಲು ಅನುಮತಿ ನೀಡಿದ. ತಾಳಿಕೋಟೆಯ ಕದನದ ಅನಂತರವೂ ಅನೇಕ ವರ್ಷಗಳ ಕಾಲ ಜಿಂಜೀಯ ನಾಯಕರು ತಮ್ಮ ಪ್ರಭುಗಳಿಗೆ ಸ್ವಾಮಿನಿಷ್ಠೆಯಿಂದ ಗೌರವ ಸಲ್ಲಿಸುತ್ತಿದ್ದರು. ತುಬಾಕಿ ಕೃಷ್ಣಪ್ಪ ನೀರಾವರಿ ಸೌಲಭ್ಯಗಳನ್ನು ನಿರ್ಮಿಸಿದ. ಅಚ್ಯುತ ರಾಮಚಂದ್ರ ನಾಯಕ ತಿರುವಣ್ಣಾಮಲೈ ದೇವಾಲಯದ ಗೋಪುರವನ್ನೂ ಅನೇಕ ಅಗ್ರಹಾರಗಳನ್ನು ಕಟ್ಟಿಸಿದ. ಜಿಂಜೀ ನಾಯಕರ ಕಲೆ ಮತ್ತು ವಾಸ್ತುಶಿಲ್ಪ ಸಾಧನೆಗಳು ತಂಜಾವೂರು ಮತ್ತು ಮಧುರೈ ನಾಯಕರಷ್ಟು ವೈಭವಯುತವಾಗಿ ಇಲ್ಲದಿದ್ದರೂ ಗಣನೀಯವಾಗಿದೆ. ಜಿಂಜೀಯ ನಾಯಕರು ಸುಮಾರು ಎರಡುವರೆ ಶತಮಾನಗಳ ಕಾಲ ಆ ಪ್ರದೇಶದ ನಾಯಕತ್ವವನ್ನು ವಹಿಸಿ ಅಲ್ಲಿಯ ಆರ್ಥಿಕ ಮತ್ತು ಸಾಮಾಜಿಕ ನೆಮ್ಮದಿಗೆ ಕಾರಣರಾಗಿದ್ದರು.				
	(ಜಿ.ಆರ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ